ಟಾರ್ಟಾರಿಕ್ ಆಮ್ಲ
	ಡೈಹೈಡ್ರಾಕ್ಸಿಸಕ್ಸಿನಿಕ್ ಆಮ್ಲ, HOOC (CHOH)2 COOH.ಬಣ್ಣವಿಲ್ಲದ ಅಥವಾ ಬಿಳಿಯ ಹರಳುಗಳಂಥ ಪುಡಿ. ನೀರು, ಆಲ್ಕೊಹಾಲ್ ಮತ್ತು ಈಥರಿನಲ್ಲಿ ವಿಲೀನವಾಗುತ್ತದೆ. ಆಮ್ಲಗಳಿಗೆ ಅನುಗುಣವಾದ ಹುಳಿ ರುಚಿ ಉಂಟು. ದ್ರವನಬಿಂದು 170o ಸೆ. ದ್ರಾಕ್ಷಿಹಣ್ಣನ್ನು ಹುದುಗಿಸಿ ದ್ರಾಕ್ಷಾರಸವನ್ನು ತಯಾರಿಸುವಾಗ ದೊರೆಯುವ ಕೆಂಪು ಮಿಶ್ರಣದಲ್ಲಿ ಟಾರ್ಟಾರಿಕ್ ಆಮ್ಲವು ಲವಣರೂಪದಲ್ಲಿ ದೊರೆಯುತ್ತದೆ. ಇದನ್ನು ಸುಣ್ಣದ ತಿಳಿಯೊಂದಿಗೆ ಸಂಸ್ಕರಿಸಿ ಕ್ಯಾಲ್ಸಿಯಮ್ ಟಾರ್ಟರೇಟನ್ನು ಪಡೆಯಲಾಗುವುದು. ಕ್ಯಾಲ್ಸಿಯಮ್ ಟಾರ್ಟರೇಟನ್ನು ಸಲ್ಫ್ಯೂರಿಕ್ ಆಮ್ಲದೊಂದಿಗೆ ಸಂಸ್ಕರಿಸಿ ಫಲಿತವನ್ನು ಶೋಧಿಸಿ, ಸ್ಫಟಿಕೀಕರಿಸಿ ಟಾರ್ಟಾರಿಕ್ ಆಮ್ಲವನ್ನು ಹರಳಿನ ರೂಪದಲ್ಲಿ ಪಡೆಯಲಾಗುವುದು,

ಚಿತ್ರ-1

	ಟಾರ್ಟಾರಿಕ್ ಆಮ್ಲಕ್ಕೆ ದ್ಯುತಿಪಟುತ್ವಗುಣ ಉಂಟು. ಲೂಯಿ ಪಾಸ್ತರ್ ತನ್ನ ಪ್ರಯೋಗಗಳಿಂದ ದ್ರಾಕ್ಷಾರಸವನ್ನು ತಯಾರಿಸಿದಾಗ ದೊರೆತ ಟಾರ್ಟಾರ್ ಕೆನೆಯಿಂದ ಪಡೆದ ಟಾರ್ಟಾರಿಕ್ ಆಮ್ಲವು ಎಡಮುರಿ ಮತ್ತು ಬಲಮುರಿ ದ್ಯುತಿ ಪಟುತ್ವವನ್ನು ಪ್ರದರ್ಶಿಸುವ ಎರಡು ಸಮಾಂಗಿಗಳು (ಐಸೊಮರುಗಳು) ಸಮ ಅಣುಪ್ರಮಾಣದಲ್ಲಿರುವ ಮಿಶ್ರಣ ಎಂದು ತೋರಿಸಿದ. ಇದಕ್ಕೆ ರೆಸೆಮಿಕ್ ಮಿಶ್ರಣ ಎಂದು ಹೆಸರು. ಸಮಾಂಗಿಗಳಲ್ಲಿ ಒಂದನ್ನು ಎಡಮುರಿ ಟಾರ್ಟಾರಿಕ್ ಆಮ್ಲ (ಲೀವೋರೊಟೇಟರಿ) ಮತ್ತು ಇನ್ನೊಂದನ್ನು ಬಲಮುರಿ ಟಾರ್ಟಾರಿಕ್ ಆಮ್ಲ (ಡೆಕ್ಸ್‍ಟ್ರೋರೋಟೇಟರಿ) ಎನ್ನುತ್ತೇವೆ. ಮೊದಲನೆಯದು ಧ್ರುವೀಕೃತ ಬೆಳಕಿನ ಸಮತಲವನ್ನು ಎಡಕ್ಕೂ ಎರಡನೆಯದು ಬಲಕ್ಕೂ ತಿರುಗಿಸುತ್ತವೆ. ಈ ಮೂರು ಬಗೆಯ (ಅಂದರೆ ರೆಸೆಮಿಕ್, ಎಡಮುರಿ, ಬಲಮುರಿ) ಟಾರ್ಟಾರಿಕ್ ಆಮ್ಲಗಳಲ್ಲದೆ ಮೀಸೋ ಟಾರ್ಟಾರಿಕ್ ಆಮ್ಲ ಎಂಬ ಇನ್ನೊಂದು ಬಗೆಯ ಸಂಯುಕ್ತವೂ ಇದೆ. ಇದು ದ್ಯುತಿಪಟುತ್ವವನ್ನು ಪ್ರದರ್ಶಿಸುವುದಿಲ್ಲ. ಟಾರ್ಟಾರಿಕ್ ಆಮ್ಲವನ್ನು ಟಾರ್ಟಾರ್ ಕೆನೆ, ಟಾರ್ಟಾರ್ ಎಮಿಟಿಕ್, ಅಸಿಟಾಲ್ಡಿಹೈಡ್ ಇತ್ಯಾದಿ ರಾಸಾಯನಿಕ ವಸ್ತುಗಳ ತಯಾರಿಕೆಯಲ್ಲಿ ಮತ್ತು ಚರ್ಮವನ್ನು ಹದಮಾಡಲು ನೊರೆಬರುವ ಪಾನೀಯಗಳಲ್ಲಿ ಬಳಸುವರು. ಹಣ್ಣಿನ ಎಸ್ಟರುಗಳ ತಯಾರಿಕೆಯಲ್ಲಿ ಇದರ ಉಪಯೋಗ ಉಂಟು. ಸೆರಾಮಿಕ್ಸ್, ಗ್ಸಾಲ್ವನೋಪ್ಲಾಸ್ಟಿಕುಗಳ ತಯಾರಿಕೆ, ಫೋಟೋಗ್ರಫಿ, ಗಾಜಿನ ಕನ್ನಡಿ ತಯಾರಿಕೆ ಮುಂತಾದವು ಟಾರ್ಟಾರಿಕ್ ಆಮ್ಲ ಬಳಕೆ ಆಗುವ ಇತರ ಕ್ಷೇತ್ರಗಳು.
(ಎಚ್.ಎಸ್.ಎಸ್.; ವೈ.ಎಸ್.ಎಲ್.; ಬಿ.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ